ನಿಜಹೇಳಬೇಕೆಂದರೆ......
ಭ್ರಮಾಧೀನರ ಲಹರಿಗಳನ್ನು
ಮೆಚ್ಚಿಸಲು ನಾನು ಬರೆಯಲಾರೆ ..
..ನಾನು
ನಿಮ್ಮ ಅಳತೆಗೆ ಸಿಗದವನು...
ನಾನು
ಬೇರೆಯೇ ವರ್ಗಕ್ಕೆ ಸೇರಿದವನು ..
ನಾನು
ಮೂಳೆ ತೊಗಲುಗಳಿರುವ ಮನುಷ್ಯ,
ನನ್ನ ಒಡಹುಟ್ಟಿದವರನ್ನು ಬಡಿಯಲು ಬಂದರೆ
ಕೈಗೆ ಸಿಕ್ಕಿದ್ದನ್ನು ಬಳಸುತ್ತೇನೆ..
ಕಾಪಾಡಿಕೊಳ್ಳುತ್ತೇನೆ..
ನಾನು ಬರೆವ ಪ್ರತಿಯೊಂದು ಸಾಲುಗಳೂ..
ಸುತ್ತಿಗೆಯ ಬಡಿತವನ್ನು
ಸಿಡಿಮಡ್ಡಿನ ಸ್ಫೋಟವನ್ನು
ಸೃಷ್ಟಿಸುತ್ತದೆ ...
ದುಷ್ಟರಲ್ಲಿ ,
ದುರಹಂಕಾರಿಗಳಲ್ಲಿ ,
ಭೀತಿಯನ್ನು ಹುಟ್ಟಿಸುತ್ತದೆ
ಆದರೆ
ನನ್ನ ರೋಷಾವಿಷ್ಟ ಶಾಂತಿಯು ..
ಒಳ್ಳೆಯವರಿಗಾಗಲೀ,
ಕೂಳಿಲ್ಲದವರಿಗಾಗಲೀ
ಯಾವ ಕೇಡನ್ನೂ ಉಂಟು ಮಾಡುವುದಿಲ್ಲ ..
ಕಂದೀಲಿನ ಬೆಳಕಿನಲ್ಲಿ
ಕದನದಲ್ಲಿ ಗಾಯಗೊಂಡವರನ್ನು
ಹುಡುಕುತ್ತೇನೆ..
ಅವರ ಗಾಯಗಳಿಗೆ ಮುಲಾಮುಹಚ್ಚಿ
ಸಂತೈಸುತ್ತೇನೆ;
ಕವಿಯೊಬ್ಬ ಮಾಡಲೇಬೇಕಾದ
ಕಾಯಕಗಳಿವು..
ಕಲ್ಲುಕುಟಿಗನ ಕೆಲಸ..
ವಿಮಾನ ಚಾಲಕನ ಕೆಲಸ;
ಭೂಮಿಯ ಮೇಲೆ ಹುಟ್ಟಿದ ಮೇಲೆ
ಇಷ್ಟಾದರೂ ಮಾಡಲೇಬೇಕು..
ಮನುಷ್ಯ ಸಮಾಜವನ್ನು ಓರಣಗೊಳಿಸಬೇಕು
ಒಂದು ವೇಳೆ
ನಾನು ದ್ವೇಷಿಸುವುದನ್ನು ದ್ವೇಷಿಸಿದಾಗ
ಅಥವಾ
ನಾನು ಪ್ರೀತಿಸುವುದನ್ನು ಪ್ರೀತಿಸಿದಾಗ ..
ನಿಮ್ಮ
ನಿರೀಕ್ಷೆಯ ಪ್ರಣಾಲಿಯನ್ನು
ನನ್ನ ಕವಿತೆಯು ಉಲ್ಲಂಘಿಸಿದಲ್ಲಿ
ನಾನು
ನನ್ನದೇ ಕಾನೂನನ್ನು ಅನುಸರಿಸುತ್ತೇನೆ ..
ನಕ್ಷತ್ರಗಳನ್ನು
ಶಸ್ತ್ರಾಸ್ತ್ತ್ರಗಳನ್ನು
ಸಂಗ್ರಹಿಸಿಟ್ಟುಕೊಳ್ಳುತ್ತೇನೆ
ಏಕೆಂದರೆ..
ಸೌಂದರ್ಯಕ್ಕೂ ನನಗೂ
ಒಲವಿನ ಒಪ್ಪಂದವಿದೆ ;
ಜನತೆಗೂ ನನಗೂ
ಸುಡುನೆತ್ತರ ಒಡಂಬಡಿಕೆಯಿದೆ..
ಮೂಲ: ಪಾಬ್ಲೊ ನೆರೂಡ
(Do Not Ask Me ಕವನದ ಆಯ್ದ ಭಾಗ )
ಕನ್ನಡ : ಶಿವಸುಂದರ್