ಆತ್ಮೀಯರೆ,
ಸೇವೆ, ಶಿಕ್ಷಣ ಹಾಗೂ ಸಂಸ್ಕಾರದ ಹಿನ್ನೆಲೆಯಲ್ಲಿ ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಗುಣಮಟ್ಟದ ಶಿಕ್ಷಣಕ್ಕಾಗಿ ಕುರಣಿ ಗ್ರಾಮದ ಸ್ವಾಮಿ ವಿವೇಕಾನಂದ ಗುರುಕುಲವು ಹಗಲಿರುಳು ಶ್ರಮಿಸುತ್ತಿರುವ ಸಂಗತಿ ತಮಗೆಲ್ಲ ಗೊತ್ತಿದೆ. ಆ ಮೂಲಕ ಇದೀಗ ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಹೊರಹೊಮ್ಮಿದೆ.
ಬರುವ ೫ ವರ್ಷಗಳಲ್ಲಿ ನಿಮ್ಮ ಈ ಗುರುಕುಲವು ೨೫ ವಸಂತಗಳನ್ನು ಪೂರೈಸಿ "ರಜತ ಸಂಭ್ರಮ" ಆಚರಿಸಿಕೊಳ್ಳಲಿದೆ. ಆದ್ದರಿಂದ ಈ ೫ ವರ್ಷಗಳ ಅವಧಿಯಲ್ಲಿ ಗುರುಕುಲದ ವತಿಯಿಂದ ಸೇವಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ " ವಿವೇಕ ವಿದ್ಯಾರ್ಥಿ ದತ್ತು ಯೋಜನೆ ". ಅದೇ ರೀತಿ ಪ್ರತಿಭಾವಂತ ಶಿಕ್ಷಕರ " ವಿವೇಕ ಗುರು ಸೇವಾ ಯೋಜನೆ", "ವಿವೇಕ ವಿದ್ಯಾರ್ಥಿ ನಿಲಯ", "ವಿವೇಕ ಸಂಧ್ಯಾ ಆಶ್ರಮ", "ವಿವೇಕ ಗೋಶಾಲೆ", ಹೀಗೆ "ಪಂಚ ವಿವೇಕ ಯೋಜನೆ" ಗಳ ಮೂಲಕ "ರಜತ ಸಂಭ್ರಮ" ವನ್ನು ಅರ್ಥಪೂರ್ಣವಾಗಿಸಲು ಯೋಜನೆ ರೂಪಿಸಲಾಗಿದೆ.
ಈ ಸೇವಾ ಕೈಂಕರ್ಯದಲ್ಲಿ ತಾವು ತೊಡಗಿಸಿಕೊಳ್ಳಬೇಕೆಂದು ನಮ್ಮ ಅಭಿಲಾಷೆ.
ಈ ವರ್ಷದ ಯೋಜನೆಯ ಅನ್ವಯ "ವಿವೇಕ ವಿದ್ಯಾರ್ಥಿ ದತ್ತು ಯೋಜನೆ" ಹಾಗೂ "ವಿವೇಕ ಶಿಕ್ಷಕ ಸೇವಾ ಯೋಜನೆ" ಯಲ್ಲಿ ೨೫೦ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ೫ ಪ್ರತಿಭಾವಂತ ಶಿಕ್ಷಕರನ್ನು ದತ್ತು ಪಡೆದು ಅವರಿಗೆ ಪ್ರೋತ್ಸಾಹ, ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿ ವ್ಯಕ್ತಪಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಈ ಯೋಜನೆಗಳಲ್ಲಿ ದತ್ತು ಪಡೆಯುವ ಪರಿವಾರದವರನ್ನು ಜನೇವರಿ ೨೬ ರಂದು ಜರುಗುವ ಭವ್ಯ " ವಿವೇಕ ಸಂಸ್ಕೃತಿ ಉತ್ಸವ" ದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ತಮ್ಮಿಂದ ಸೇವೆಯನ್ನು ಪಡೆಯುವ ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರತಿ ತಿಂಗಳ ಪ್ರಗತಿ ಪತ್ರವನ್ನು ತಮಗೆ ತಲುಪಿಸಲಾಗುವುದು.
ತಮ್ಮಿಂದ ಸೇವೆ ಪಡೆದ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ತಮಗೆ ಕೃತಜ್ಞತಾ ಸಮರ್ಪಣೆ ಮಾಡಲಾಗುವುದು.
"ಬನ್ನಿ ಎಲ್ಲರೂ ಕೈ ಜೋಡಿಸಿ, ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪ್ರೇರಣೆ ನೀಡೋಣ.
ಸಾಮಾಜಿಕ ಸೇವೆಯ ಶಕ್ತಿಯನ್ನು ಪರಿಚಯಿಸೋಣ."
ಧನ್ಯವಾದ