ಗಜಲ್
*******
ನಿನ್ನ ತುಸು ಕಿರುನಗೆಯಾದರೂ ಇರಲಿ ನನ್ನ ಇರುಳಿಗೆ
ನಿನ್ನ ತುಸು ಮುಂಗುರುಳ ಸ್ಪರ್ಶವಾದರೂ ಇರಲಿ ನನ್ನ ಇರುಳಿಗೆ
ನಶ್ವರದ ಬದುಕು ಚಿಗಿತು ಒಣಗುವುದು
ನಿನ್ನ ತುಸು ಮೌನವಾದರೂ ಇರಲಿ ನನ್ನ ಇರುಳಿಗೆ
ಬೆಳಕು ಕತ್ತಲೆಯು ಜೀವನದ ಏಣಿಯಾಟ
ನಿನ್ನ ತುಸು ಹುಸಿಮುನಿಸಾದರೂ ಇರಲಿ ನನ್ನ ಇರುಳಿಗೆ
ಹುಟ್ಟಿದ ಸೂರ್ಯ ಮುಳುಗಲೇ ಬೇಕಲ್ಲವೇ?
ನಿನ್ನ ತುಸು ಮುಗುಳಿನ ಕನಸಾದರೂ ಇರಲಿ ನನ್ನ ಇರುಳಿಗೆ
ಎಲ್ಲೋ ಹುಟ್ಟಿ ಎಲ್ಲೋ ಹರಿವ ನದಿಯಂತೆ ಹೆಣ್ಣಿನ ಜೀವನ...
ನಿನ್ನ ತುಸು ಪಿಸುಮಾತಾದರೂ ಇರಲಿ ನನ್ನ ಇರುಳಿಗೆ
ಬೆಂದಷ್ಟು ಪಕ್ವವಂತೆ ಸಿಹಿ ಸಾರ ಸಂಸಾರ
ನಿನ್ನ ತುಸು ಸುಕ್ಕಾದ ಮುಪ್ಪಾದ ದಿನಗಳಾದರೂ ಇರಲಿ ನನ್ನ ಇರುಳಿಗೆ
ಗೋರಿಯಲಿ ನೆನಪುಗಳ ಶವಯಾತ್ರೆ ಕೂಡ ದೇವನಿಗೆ ಪ್ರಿಯವಂತೆ..
ನಿನ್ನ ತುಸು ಬಿಸಿ ಉಸಿರ ಧಗೆಯಾದರೂ ಇರಲಿ ನನ್ನ ಇರುಳಿಗೆ
- ದೇವರಾಜ್ ಹುಣಸಿಕಟ್ಟಿ.
ಶಿಕ್ಷಕರು,ಕವಿಗಳು,ರಾಣೇಬೆನ್ನೂರ್