ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ
ಜನನ
ತಿಮ್ಮಪ್ಪ ನಾಯಕ
1487
ಬಾಡ, ಹಾವೇರಿ ಜಿಲ್ಲೆ,ಸಿಗ್ಗಾವಿ ತಾಲೂಕಿನ ಕರ್ನಾಟಕ ರಾಜ್ಯ, ಭಾರತ
ಮರಣ
1609
ಬಾಡ
ವೃತ್ತಿ
ಹರಿದಾಸರು, ಕೀರ್ತನಕಾರರು, ಕವಿ
ಪ್ರಕಾರ/ಶೈಲಿ
ಕೀರ್ತನೆ, ಉಗಾಭೋಗ, ಮುಂಡಿಗೆ, ಕಾವ್ಯ
ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.
ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.
ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.
ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.
ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.